ಮಂಡ್ಯ : ರೈಲಿಗೆ ಸಿಲುಕಿ 30 ಕ್ಕೂ ಹೆಚ್ಚು ಕುರಿಗಳು ಸಾವು

Kannada News (itskannada) Mandya : ಮಂಡ್ಯ : ರೈಲಿಗೆ ಸಿಲುಕಿ 30 ಕ್ಕೂ ಹೆಚ್ಚು ಕುರಿಗಳು ಸಾವು – : ರೈಲು ಹಳಿ ದಾಟುತ್ತಿದ್ದ 30 ಕ್ಕೂ ಹೆಚ್ಚು  ಕುರಿಗಳು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಹೊರವಲಯದ ಉಮ್ಮಡಹಳ್ಳಿ ಬಳಿ ನಡೆದಿದೆ.ತಾಲ್ಲೂಕಿನ ಎಂ. ಹೊಸಹಳ್ಳಿ ಗ್ರಾಮದ ಕುಮಾರ್ ಎಂಬುವರಿಗೆ ಸೇರಿದ ಕುರಿಗಳು ರೈಲಿಗೆ ಸಿಕ್ಕಿ ಮೃತಪಟ್ಟಿವೆ. ಘಟನೆಯಲ್ಲಿ ಕುರಿಗಾಹಿ ಕುಮಾರ್ ಎಂಬುವವರೂ ಸಹ ಗಾಯಗೊಂಡಿದ್ದು, ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಧ್ಯಾಹ್ನ ಉಮ್ಮಡಹಳ್ಳಿ ಗೇಟ್ ಬಳಿ ಕುರಿಗಳನ್ನು ರೈಲು ಹಳಿ ದಾಟಿಸುತ್ತಿದ್ದ ವೇಳೆ ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಟಿಪ್ಪು ಎಕ್ಸ್ ಪ್ರೆಸ್ಸ್ ರೈಲು ಬಂದಿದೆ. ಇದನ್ನು ಕಂಡ ಕುಮಾರ್ ಗಾಬರಿಯಿಂದ ಕುರಿಗಳನ್ನು ಓಡಿಸಲು ಯತ್ನಿಸಿದ್ದಾನೆ. ಆದರೆ ಸಾಧ್ಯವಾಗಲಿಲ್ಲ. ಅತೀ ಸಮೀಪಕ್ಕೆ ಬಂದ ರೈಲಿನ ಇಂಜಿನ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆತನೂ ಗಾಯಗೊಂಡಿದ್ದಾನೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಆತನನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಒಟ್ಟು 30 ಕುರಿಗಳು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದು, ಸುಮಾರು 3 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ. //// Mandya News Online