ಬೆಳಗಾವಿ ಅಧಿವೇಶನ ತೃಪ್ತಿಕರ-ವಿಧಾನ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್

Belgaum session is a satisfactory-Says Speaker KR Ramesh Kumar

0

ಬೆಳಗಾವಿ ಅಧಿವೇಶನ ತೃಪ್ತಿಕರ-ವಿಧಾನ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್

ಬೆಳಗಾವಿ : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 10 ರಿಂದ ನಡೆದ 15ನೇ ವಿಧಾನಸಭೆಯ 2ನೇ ಅಧಿವೇಶನ ತೃಪ್ತಿಕರವಾಗಿ ಮುಕ್ತಾಯಗೊಂಡಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್‌ಕುಮಾರ್ ತಿಳಿಸಿದ್ದಾರೆ.

ಹತ್ತು ದಿನಗಳ ಕಲಾಪ ಇಂದಿಗೆ ಮುಕ್ತಾಯಗೊಂಡ ನಂತರ ಸುವರ್ಣ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಡಿಸೆಂಬರ್ 10 ರಿಂದ 21 ರ ವರೆಗೆ 40 ಗಂಟೆ 45 ನಿಮಿಷಗಳ ಕಾಲ ಅಧಿವೇಶನದಲ್ಲಿ ಕಲಾಪಗಳು ನಡೆದಿದ್ದು, ವಿಧಾನಸಭೆಯ ಕಾರ್ಯಕಲಾಪಗಳು ಸಮಾಧಾನ ಮತ್ತು ತೃಪ್ತಿ ತಂದಿದೆ ಎಂದು ತಿಳಿಸಿದರು.

ಅಧಿವೇಶನ ಆರಂಭದ ದಿನದಲ್ಲಿ ಇತ್ತಿಚಿಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕೇಂದ್ರ ಸಚಿವ ಹೆಚ್.ಎನ್. ಅನಂತಕುಮಾರ್, ಕೇಂದ್ರದ ಮಾಜಿ ಸಚಿವರಾದ ಸಿ.ಕೆ. ಜಾಫರ್ ಷರೀಪ್, ಡಾ. ಎಂ.ಹೆಚ್. ಅಂಬರೀಷ್, ರಾಜ್ಯದ ಮಾಜಿ ಸಚಿವರಾಗಿದ್ದ ತಿಪ್ಪೇಸ್ವಾಮಿ, ಈಟಿ ಶಂಭುನಾಥ್, ಓಂಪ್ರಕಾಶ ಕಣಗಲಿ, ವಿಮಲಾಬಾಯಿ ದೇಶಮುಖ, ಶಾಸಕರಾಗಿದ್ದ ಮಲ್ಲಪ್ಪ ವೀರಪ್ಪ ಶೆಟ್ಟಿ. ವಿಶ್ವನಾಥ ಕರಬಸಪ್ಪ ಮಾಮನಿ, ಎಂ.ಪಿ. ರವೀಂದ್ರ, ಬಾಬುರೆಡ್ಡಿ ವೆಂಕಪ್ಪ ತುಂಗಳ, ಹೆಚ್.ಎಸ್. ಪ್ರಕಾಶ್, ಎಂ. ಭಕ್ರವತ್ಸಲಂ ಮತ್ತು ಕರಿಯಣ್ಣ ಅವರುಗಳ ನಿಧನಕ್ಕೆ ಸಂತಾಪ ಸೂಚನಾ ನಿರ್ಣಯ ಮಂಡಿಸಿ ಅಂಗೀಕರಿಸಲಾಗಿದೆ ಎಂದು ಅವರು ತಿಳಿಸಿದರು.

2018-19 ನೇ ಸಾಲಿನ ಪೂರಕ ಅಂದಾಜುಗಳ ಮೊದಲನೇ ಕಂತನ್ನು ವಿಧಾನಸಭೆಯಲ್ಲಿ ಮಂಡಿಸಿ ಚರ್ಚೆ ನಡೆಸಿ ಅಂಗೀಕರಿಸಲಾಗಿದೆ. 2018-19 ನೇ ಸಾಲಿನ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ಮಂಡಿಸಲಾಯಿತು.

ಭಾರತ ಸಂವಿಧಾನದ 151 (2) ನೇ ಅನುಚ್ಛೇದದ ಮೇರೆಗೆ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು 2017 ಮಾರ್ಚ್ 31 ಕ್ಕೆ ಕೊನೆಗೊಂಡ ವರ್ಷಕ್ಕೆ ನೀಡಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಮೇಲಿನ ಕಾರ್ಯನಿರ್ವಹಣೆಯ ಲೆಕ್ಕಪರಿಶೋಧನಾ ವರದಿ ಮತ್ತು ಸರ್ಕಾರಿ ಭೂಮಿ ಮಂಜೂರಾತಿ, ಗುತ್ತಿಗೆ, ಒತ್ತುವರಿಗಳ ತೆರವುಗೊಳಿಸುವಿಕೆ ಹಾಗೂ ಅಕ್ರಮ ಹಿಡುವಳಿಗಳನ್ನು ಸಕ್ರಮಗೊಳಿಸುವಿಕೆಗಳ ವರದಿಗಳನ್ನು ಮಂಡಿಸಲಾಗಿದೆ ಎಂದು ಸಭಾಧ್ಯಕ್ಷರು ವಿವರಿಸಿದರು.

ಅಲ್ಲದೇ 15ನೇ ವಿಧಾನಸಭೆಯ ವಿವಿಧ ಸಮಿತಿಗಳ ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದೆ ಹಾಗೂ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡಾವಳಿಯ ವಿವಿಧ ನಿಯಮಾವಳಿಗಳಂತೆ ಚರ್ಚೆಗಳನ್ನು ನಡೆಸಲಾಗಿದೆ.

ಒಟ್ಟು 3060 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸುವ 146 ಕ್ಕೆ ಹಾಗೂ ಲಿಖಿತ ಮೂಲಕ ಉತ್ತರಿಸುವ 2217 ಪ್ರಶ್ನೆಗಳ ಪೈಕಿ 1978 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ ಎಂದರು.
ಒಟ್ಟು 12 ವಿಧೇಯಕಗಳನ್ನು ಮಂಡಿಸಲಾಗಿದ್ದು, 8 ವಿಧೇಯಕಗಳನ್ನು ಅಂಗೀಕರಿಸಲಾಗಿದೆ.

ಕರ್ನಾಟಕ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿ ಮತ್ತು ಕರ್ನಾಟಕ ವಿಧಾನ ಪರಿಷತ್ತಿನಿಂದ ತಿದ್ದುಪಡಿಯೊಂದಿಗೆ ಅಂಗೀಕಾರವಾದ ರೂಪದಲ್ಲಿರುವ 2018ನೇ ಸಾಲಿನ ತಾಂತ್ರಿಕ ವಿಶ್ವವಿದ್ಯಾಲಯ, ಬೆಂಗಳೂರು (ತಿದ್ದುಪಡಿ) ವಿಧೇಯಕವನ್ನು ಪುನರ್‌ಪರ್ಯಾಲೋಚಿಸಿ ಅಂಗೀಕರಿಸಲಾಗಿದೆ.

ರಾಜೀವ್‌ಗಾಂಧೀ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್‌ಗೆ 3 ಜನ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ವಿಧಾನಸಭೆ ಸಭಾಧ್ಯಕ್ಷರಿಗೆ ಇಂದು ಅಧಿಕಾರ ನೀಡಿರುತ್ತದೆ ಎಂದು ಅವರು ವಿವರಿಸಿದರು.

ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು, ಮರಳು ಸಮಸ್ಯೆ ಕುರಿತು, ನೀರಾವರಿ ವಿಷಯಗಳ ಕುರಿತು ಹಾಗೂ ಬೆಂಗಳೂರಿನ ಬಿ.ಎಂ. ಕಾವಲು ಪ್ರದೇಶದ ಸರ್ಕಾರಿ ಭೂಮಿ ಪರಭಾರೆ ವಿಷಯಗಳ ಕುರಿತು ಮಹತ್ವದ ಚರ್ಚೆಯ ಅಗತ್ಯವಿತ್ತು.

ಅದನ್ನು ಹೊರತುಪಡಿಸಿ ಒಟ್ಟಾರೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿವೇಶನದ ಕಾರ್ಯಕಲಾಪಗಳು ಸಮಾಧಾನ ತಂದಿವೆ ಎಂದು ಸಭಾಧ್ಯಕ್ಷರು ತಿಳಿಸಿದರು. ////

WebTitle : ಬೆಳಗಾವಿ ಅಧಿವೇಶನ ತೃಪ್ತಿಕರ-ವಿಧಾನ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್-Belgaum session is a satisfactory-Says Speaker KR Ramesh Kumar

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್  : Kannada Politics News  ।  Karnataka Politics News | Belgaum News Kannada | Belgaum News Today