ಕುಮಾರಸ್ವಾಮಿಯವರ ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಷ್ಟೀಯ ನಾಯಕರ ದಂಡು

Karnataka Politics (itskannada) ಕುಮಾರಸ್ವಾಮಿಯವರ ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಷ್ಟೀಯ ನಾಯಕರ ದಂಡು : ಹನ್ನೊಂದು ವರ್ಷಗಳ ನಂತರ ಅಧಿಕಾರಕ್ಕೇರುತ್ತಿರುವ ಜೆಡಿಎಸ್‍ನಲ್ಲಿ ಸಂಭ್ರಮ ಮನೆ ಮಾಡಿದ್ದು, ಇದೇ ನೆಪದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ತೃತೀಯ ರಂಗವನ್ನು ಬಲಪಡಿಸಲು ವೇದಿಕೆ ಸಜ್ಜುಗೊಳ್ಳುತ್ತಿದೆ. ಬುಧವಾರ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ಆ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಜಾತ್ಯತೀತ ನೆಲೆಯಲ್ಲಿ ಗುರುತಿಸಿಕೊಂಡಿರುವ ಎಲ್ಲ ಪ್ರಾದೇಶಿಕ ಮುಖಂಡರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.

ಕುಮಾರಸ್ವಾಮಿಯವರ ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಷ್ಟೀಯ ನಾಯಕರ ದಂಡು

ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಿರುವುದರಿಂದ ಕಾಂಗ್ರೆಸ್ ಮುಖಂಡರಾದ ಸೋನಿಯಾಗಾಂಧಿ, ರಾಹುಲ್‍ಗಾಂಧಿ, ಗುಲಾಬ್‍ನಬಿ ಆಜಾದ್, ಅಹಮ್ಮದ್‍ಪಟೇಲ್, ಚಿದಂಬರಂ, ಎ.ಕೆ.ಆಂಟೋನಿ ಸೇರಿದಂತೆ ಮತ್ತಿತರ ಹಿರಿಯ ನಾಯಕರಿಗೆ ಆಹ್ವಾನ ನೀಡಲಾಗಿದೆ. ಅದೇ ಸಂದರ್ಭದಲ್ಲಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾಬ್ಯಾನರ್ಜಿ, ಬಿಎಸ್‍ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‍ಯಾದವ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು, ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರರಾವ್, ಕೇರಳದ ಮುಖ್ಯಮಂತ್ರಿ ಪಿಣ್ಣರಾಯ್ ವಿಜಯನ್ ಸೇರಿದಂತೆ ಇನ್ನು ಹಲವು ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗುತ್ತಿದೆ. ಅದರಲ್ಲಿ ಬಹುತೇಕ ನಾಯಕರು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗುವ ಸಾಧ್ಯತೆ ಇದೆ. ಈ ಮೂಲಕ ಬಿಜೆಪಿಗೆ ವಿರುದ್ಧವಾಗಿ ಪ್ರಬಲವಾದ ಮೈತ್ರಿಕೂಡ ರಚಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.

ಲೋಕಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇದ್ದು, ಈಗಾಗಲೇ ಬಿಜೆಪಿ ತಯಾರಿ ಆರಂಭಿಸಿದೆ. ಪ್ರಾದೇಶಿಕ ಪಕ್ಷಗಳು ಬೇರೆ ಬೇರೆಯಾಗಿ ಚುನಾವಣೆ ಎದುರಿಸಿದರೆ, ಬಿಜೆಪಿಗೆ ಮತ್ತೆ ಅಧಿಕಾರ ಬಿಟ್ಟುಕೊಟ್ಟಂತಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಪ್ರಬಲವಾದ ಮೈತ್ರಿಕೂಟ ರಚಿಸಿಕೊಳ್ಳಲು ತಯಾರಿ ನಡೆಯುತ್ತಿದ್ದು, ಅದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೇ ಮುಂದಾಳತ್ವ ವಹಿಸಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಸಂಘಟನಾತ್ಮಕ ಪ್ರಯತ್ನದಿಂದ ನಿನ್ನೆ ನಡೆದ ವಿಶ್ವಾಸ ಮತಯಾಚನೆಯಲ್ಲಿ ಬಿಜೆಪಿಯನ್ನು ಸೋಲಿಸಲಾಗಿದೆ. ರಾಜ್ಯದ ಮಟ್ಟಿಗೆ ಉಭಯ ಪಕ್ಷಗಳ ಮೈತ್ರಿ ಸದ್ಯಕ್ಕೆ ಸುಸ್ತಿರವಾಗಿದ್ದು, ಲೋಕಸಭೆ ಚುನಾವಣೆವರೆಗೂ ಇದೇ ಸ್ಥಿತಿ ಮುಂದುವರೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅದಕ್ಕೆ ಜಾತ್ಯತೀತ ನಿಲುವು ಹೊಂದಿರುವ ರಾಷ್ಟ್ರೀಯ ಮುಖಂಡರು ಕೂಡ ಕೈ ಜೋಡಿಸುತ್ತಿದ್ದಾರೆ. //// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Karnataka Politics News – Kannada Politics News

WebTitle – ಕುಮಾರಸ್ವಾಮಿಯವರ ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಷ್ಟೀಯ ನಾಯಕರ ದಂಡು