ಲಸಿಕಾ ಕಾರ್ಯಕ್ರಮದ ಯಶಸ್ಸಿನ ಮೌಲ್ಯಮಾಪನ ನಡೆಸಿ-ಡಾ.ಹರೀಶ್ ಕುಮಾರ್ ಸಲಹೆ

Chamarajanagar (itskannada) ಚಾಮರಾಜನಗರ: ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅನುಷ್ಠಾನಗೊಳ್ಳುವ ಲಸಿಕಾ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಪ್ರತ್ಯೇಕ ಸಂಸ್ಥೆಯಿಂದ ಮೌಲ್ಯಮಾಪನ ನಡೆಸಿ ಅದರಿಂದ ವ್ಯವಸ್ಥೆಯಲ್ಲಿ ಅಳವಡಿಸಬಹುದಾದ ಸುಧಾರಣೆಗಳ ಬಗ್ಗೆ ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಹರೀಶ್ ಕುಮಾರ್ ಅವರು ಸಲಹೆ ನೀಡಿದರು.

ಲಸಿಕಾ ಕಾರ್ಯಕ್ರಮದ ಯಶಸ್ಸಿನ ಮೌಲ್ಯಮಾಪನ ನಡೆಸಿ-ಡಾ.ಹರೀಶ್ ಕುಮಾರ್ ಸಲಹೆ

ಮ್ಮ ಕಚೇರಿ ಸಭಾಂಗಣದಲ್ಲಿ ಮಿಷನ್ ಅಂತ್ಯೋದಯ ಹಾಗೂ ಮಿಷನ್ ಇಂದ್ರಧನುಷ್ ಕಾರ್ಯಕ್ರಮಗಳ ಲಸಿಕಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಕಿಅಂಶಗಳಲ್ಲಿ ಗುರಿ ಮುಟ್ಟುವುದರಿಂದ ಮಾತ್ರ ಲಸಿಕಾ ಕಾರ್ಯಕ್ರಮದ ಯಶಸ್ಸನ್ನು ಅಳೆಯಲು ಸಾಧ್ಯವಿಲ್ಲ. ಬುಡಮಟ್ಟದಲ್ಲಿ ಕಾರ್ಯನಿರ್ವಹಿಸುವಂತ ಅಂಗವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲ ಲಸಿಕಾ ಫಲಾನುಭವಿಗಳ ಸಂಪೂರ್ಣ ಮಾಹಿತಿ ಲಭ್ಯವಿರಬೇಕು. ಅದನ್ನು ಆಧರಿಸಿ ಲಸಿಕಾ ಕಾರ್ಯಕ್ರಮದ ಸಮರ್ಪಕ ಅನುಷ್ಠಾನ ಮಾಡುವುದು ಅವರ ಜವಾಬ್ದಾರಿಯಾಗಿರಬೇಕು ಎಂದ ಅವರು ಈ ವ್ಯವಸ್ಥೆಯನ್ನು ಬಲಪಡಿಸಲು ಪ್ರತ್ಯೇಕ ಸಂಸ್ಥೆಯಿಂದ ಮೌಲ್ಯಮಾಪನ ಕಾರ್ಯವನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಸಾದ್ ಅವರಿಗೆ ಸಲಹೆ ನೀಡಿದರು.

ಇದೊಂದು ವಿನೂತನ ಪ್ರಯತ್ನವಾಗಲಿ ಎಂದ ಅವರು ಲಸಿಕಾ ಕಾರ್ಯಕ್ರಮ ಅನುಷ್ಠಾನದ ಸಾಧಕಬಾಧಕಗಳನ್ನು ಅಳೆಯಲು ಇದು ಸೂಕ್ತ ಸಾಧನವಾಗಲಿದ್ದು ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಮಾದರಿಯಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಲಸಿಕಾ ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗೆ ಆಶಾ ಕಾರ್ಯಕರ್ತೆಯರಿಗೆ ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿಗಳನ್ನು ಆಯೋಜಿಸುವುದು ಅಗತ್ಯವೆಂದು ತಿಳಿಸಿದ ಡಾ. ಹರೀಶ್ ಕುಮಾರ್ ಇಲಾಖೆಯು ಎಲ್ಲ ಫಲಾನುಭವಿಗಳನ್ನು ತಲುಪಲು ಅಳವಡಿಸಿಕೊಂಡಿರುವ ಸಾಮೂಹಿಕ ವಿಧಾನದ ಜೊತೆಜೊತೆಗೆ ವಯಕ್ತಿಕವಾಗಿ ಅವರುಗಳನ್ನು ತಲುಪುವ ಪ್ರಯತ್ನಗಳನ್ನು ಮಾಡಬೇಕು ಎಂದು ಸೂಚಿಸಿದರು. ತಳಮಟ್ಟದ ನಿರ್ವಹಣೆ ಇಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಸಾದ್ ಮಾತನಾಡಿ ಇಲಾಖೆಯು ಲಸಿಕಾ ಕಾರ್ಯಕ್ರಮ ಅನುಷ್ಠಾನಕ್ಕೆ ಗುರಿ ಮುಕ್ತ ವಿಧಾನವನ್ನು ಅನುಸರಿಸುತ್ತಿದ್ದು, ಪ್ರತಿ ಗುರುವಾರ ಲಸಿಕಾ ದಿನವಾಗಿ ಹಾಗೂ ಪ್ರತಿ ಮಂಗಳವಾರದಂದು ಮನೆಮನೆಗೆ ತೆರಳಿ ಲಸಿಕೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಪ್ರಸ್ತುತ ಲಸಿಕಾ ಕಾರ್ಯಕ್ರಮ ಸಾಧನೆಯ ಯಾವುದೇ ಮಾಹಿತಿ ತಪ್ಪಾಗಿರಲು ಸಾಧ್ಯತೆ ಇರುವುದಿಲ್ಲ ಎಂದು ಸ್ಪಷ್ಠಪಡಿಸಿದರು.

ಮಿಷನ್ ಇಂದ್ರಧನುಷ್ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 24 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ ಚಾಮರಾಜನಗರದಲ್ಲಿ 09, ಗುಂಡ್ಲುಪೇಟೆಯಲ್ಲಿ 01, ಕೊಳ್ಳೇಗಾಲದಲ್ಲಿ 11 ಹಾಗೂ ಯಳಂದೂರಿನಲ್ಲಿ 03 ಗ್ರಾಮಗಳನ್ನು ಗುರುತಿಸಲಾಗಿದೆ ಎಂದರು.
ಸದರಿ ಗ್ರಾಮಗಳಲ್ಲೇ ಮೌಲ್ಯಮಾಪನ ಕಾರ್ಯವನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.
ಮಿಷನ್ ಅಂತ್ಯೋದಯದಡಿ ಒಟ್ಟು 10 ಗ್ರಾಮಪಂಚಾಯಿತಿಗಳನ್ನು ಗುರುತಿಸಿ ಲಸಿಕಾ ಕಾರ್ಯಕ್ರಮದ ಶೇ.100ರಷ್ಟು ಪ್ರಗತಿ ಸಾಧಿಸಲು ಕ್ರಮ ವಹಿಸಲಾಗಿದೆ ಎಂದು ಡಾ. ಪ್ರಸಾದ್ ಸಭೆಗೆ ತಿಳಿಸಿದರು. ಸಭೆಯಲ್ಲಿ ಸಮಿತಿಯ ಸದಸ್ಯರು ಹಾಗೂ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ////  Chamarajanagar News Online